ಮೆಡಿಸಿ, ಲೊರೆನ್ಜೊ
 	(1449 - 92) : ಫ್ಲಾರೆನ್ಸಿನ ಸುಪ್ರಸಿದ್ಧ ಮೆಡಿಸಿ ಮನೆತನದ ಮಹಾವ್ಯಕ್ತಿ. ಫ್ಲಾರೆನ್ಸ್ ನಗರರಾಜ್ಯದ ಅನಭಿಷಿಕ್ತ ದೊರೆ, ಮಹಾನಾಯಕ, ಹೆಗ್ಗಡೆ (ಲೊರೆನ್ಜೊದ ಗ್ರೇಟ್) ಎಂಬ ಗೌರವಕ್ಕೆ ಪಾತ್ರನಾಗಿದ್ದವನು.

	12ನೆಯ ಶತಕದಷ್ಟು ಹಿಂದೆಯೇ ಫ್ಲಾರೆಂಟೈನ್ ವೃತ್ತಾಂತ ದಾಖಲೆ ಪುಸ್ತಕದಲ್ಲಿ ಮೆಡಿಸಿ ಮನೆತನದ ಉಲ್ಲೇಖವಿದೆ. 13ನೆಯ ಶತಕದಿಂದ 17ನೆಯ ಶತಕದವರೆಗೂ ಫ್ಲಾರೆನ್ಸಿನ ಹಾಗೂ ಯುರೊಪಿನ ಇತಿಹಾಸದೊಂದಿಗೆ ಈ ಮನೆತನದ ಇತಿಹಾಸವೂ ಬೆರೆತುಹೋಗಿದೆ. ಲೊರೆನ್ಜೊ 1ಜನವರಿ 1449ರಂದು ಜನಿಸಿದ. ತಂದೆ ಪಿಯೆರೊ ಮೆಡಿಸಿ (1416--69). ತಾಯಿ ಲೂಕ್ರೆಜಿಯಾ ತೋರ್ನಬ್ಯೋನಿ. ಇವರಿಗೆ ಲೊರೆನ್ಜೊ, ಗಿಯುಲಿಯಾನೊ ಎಂಬ ಇಬ್ಬರು ಪುತ್ರರೂ ಬಿಯಾಂಕಾ, ನ್ಯಾನ್ನಿನಾ, ಮಾರಿಯಾ ಎಂಬ ಮೂವರು ಪುತ್ರಿಯರೂ ಇದ್ದರು. ಜ್ಯೇಷ್ಠನಾದ ಲೊರೆನ್ಜೊ ತನ್ನ ತಾತ ಸುಪ್ರಸಿದ್ಧ ಕಾಸಿಮೋನಂತೆ (1389 --1464) ಮಹಾ ವರ್ಚಸ್ವಿ. ಮಹತ್ತ್ವಾಕಾಂಕ್ಷಿ, ಸಾಹಿತ್ಯ ಕಲಾಭಿಮಾನಿ. ಸಾಹಿತ್ಯ ಪ್ರತಿಭೆಯಲ್ಲಿ ತಾತನನ್ನು ಮೀರಿಸಿದವನು. ಆದರೆ ಲೌಕಿಕ, ವಿಶೇಷತಃ ಹಣಕಾಸಿನ ವ್ಯವಹಾರದಲ್ಲಿ ತಾತನಷ್ಟು ಚತುರನಲ್ಲ. ಕಾಸಿಮೋನ ಕಾಲಕ್ಕಾಗಲೇ ಮೆಡಿಸಿ ಮನೆತನ ಆಗರ್ಭ ಶ್ರೀಮಂತಿಕೆಯನ್ನು ಪಡೆದಿತ್ತು. ಕಾಸಿಮೋನ ತಂದೆ ಗಿಯೊವನ್ನಿ ವ್ಯಾಪಾರದಿಂದ ಅಪಾರ ಸಂಪತ್ತನ್ನು ಗಳಿಸಿ ಫ್ಲಾರೆನ್ಸ್ ರಿಪಬ್ಲಿಕ್‍ನಲ್ಲಿ ಪ್ರತಿಷ್ಠಿತನೆನಿಸಿದ್ದ; ಪ್ರಭಾವಶಾಲಿಯಾಗಿದ್ದ. ಅದರ ಫಲವಾದ ಪರಮಾಧಿಕಾರವನ್ನು ಪಡೆದ ಕಾಸಿಮೋ ಫ್ಲಾರೆನ್ಸ್ ನಗರವನ್ನು ಅಭಿವೃದ್ಧಿಗೊಳಿಸಿದ. ಶ್ರೇಷ್ಠ ವಿದ್ವಾಂಸರಿಗೂ ಕವಿಗಳಿಗೂ ಶಿಲ್ಪಚಿತ್ರ ಕಲಾವಿದರುಗಳಿಗೂ ಉದಾರವಾದ ಆಶ್ರಯವನ್ನು ನೀಡಿದ. ಪ್ಲೇಟೋನ ತತ್ತ್ವಶಾಸ್ತ್ರಕ್ಕೆ ಮೀಸಲಾದ ಒಂದು ಅಧ್ಯಯನ ಸಂಸ್ಥೆಯನ್ನೂ ಹಲವಾರು ಅಮೂಲ್ಯವಾದ ಪ್ರಾಚೀನ ಗ್ರಂಥಗಳನ್ನೂ ಹಸ್ತಪ್ರತಿಗಳನ್ನೂ ಸಂಗ್ರಹಿಸಿ ಸುಪ್ರಸಿದ್ಧ ಲಾರೆನ್ಷಿಯನ್ ಪುಸ್ತಕ ಭಂಡಾರವನ್ನೂ ಸ್ಥಾಪಿಸಿದ. ರಿನೇಸಾನ್ಸ್ ವಿಚಾರಗಳಿಗೂ ಪ್ರಚಾರಗಳಿಗೂ ಫ್ಲಾರೆನ್ಸ್ ಸ್ಫೂರ್ತಿಯ ನೆಲೆಯಾಯಿತು. ಫ್ಲಾರೆನ್ಸ್ ನಾಡಿನ ನಿರ್ಮಾಪಕ, ತಂದೆ ಎಂಬ ಸನ್ಮಾನಕ್ಕೆ ಕಾಸಿಮೋ ಪಾತ್ರನಾಗಿದ್ದ.    

	ತಾತ ಆರಂಭಿಸಿ ಅಪೂರ್ಣವಾಗಿದ್ದ ಅನೇಕ ರಾಜಕೀಯ, ಸಾಂಸ್ಕøತಿಕ ಯೋಜನೆಗಳನ್ನು ಲೊರೆನ್ಜೊ ಪೂರ್ಣಗೊಳಿಸಿದ. ಈತ ಭಾವಾವೇಗಕ್ಕೊಳಗಾಗಿ ವರ್ತಿಸುವ ಸ್ವಭಾವದವನಾದರೂ ರಾಜಕಾರಣದಲ್ಲಿ ಉದಾತ್ತವಾದ ದೃಷ್ಟಿ. ಉನ್ನತವಾದ ಆಶೋತ್ತರಗಳನ್ನು ಇರಿಸಿಕೊಂಡಿದ್ದ. ತಾತನ ಚಾಣಾಕ್ಷ ಧೋರಣೆಯನ್ನೇ ಅನುಸರಿಸಿದರೂ ಕಾರ್ಯಾಚರಣೆಯ ಸಮಯದಲ್ಲಿ ಕೊಂಚ ಅಜಾಗರೂಕನಾಗಿಬಿಡುತ್ತಿದ್ದ. ಕೋಪ, ಪ್ರತೀಕಾರಭಾವನೆಗಳಿಗೆ ವಶನಾದಾಗ ವಿವೇಚನೆಯನ್ನು ಕಳೆದುಕೊಳ್ಳುತ್ತಿದ್ದ. ಹೆಸರಿಗೆ ರಿಪಬ್ಲಿಕ್ ಆಡಳಿತವನ್ನು ಬೆಂಬಲಿಸಿದಂತೆ ಇರುತ್ತಿದ್ದರೂ ಸರ್ವಾಧಿಕಾರಿ ಮನೋಧರ್ಮದವನಾಗಿದ್ದ. ಈತ ಹೇಳಿದುದೇ ಆಡಳಿತದಲ್ಲಿ ಕೊನೆಯ ಮಾತಾಗುತ್ತಿತ್ತು. ರಾಜ್ಯವನ್ನು ತನ್ನ ಬಿಗಿ ಹಿಡಿತದಲ್ಲಿರಿಸಿಕೊಂಡು ರಾಜನೇ ಎಂಬಷ್ಟು ದರ್ಪದಿಂದ ಫ್ಲಾರೆನ್ಸ್ ನಗರವನ್ನಾಳಿದ.      

	ಮೆಡಿಸಿ ಕುಟುಂಬದವರಿಗೂ ಫಜಿ ಎಂಬ ಇನ್ನೊಂದು ಪ್ರಬಲವಾದ ಶ್ರೀಮಂತ ಕುಟುಂಬದವರಿಗೂ ತಲೆತಲಾಂತರದ ಬದ್ಧದ್ವೇಷ. ಗಿಯೊವನ್ನಿ ಬಾರೋಮಿಯಾನ ಆಸ್ತಿಪಾಸ್ತಿಗಳಿಗೂ ಫಜಿಕುಟುಂಬದವರು ವಾರಸುದಾರರಾಗಿ ಹಣದಿಂದ ಇನ್ನೂ ಪ್ರಬಲರಾಗುವರೆಂದು ಲೊರೆನ್ಜೊ ಕಾನೂನು ತಿದ್ದುಪಡಿಮಾಡಿ ಅದನ್ನು ತಪ್ಪಿಸಿದ. ಇದರಿಂದ ವೈರ-ವಿರಸ ಉಲ್ಬಣವಾದವು. ಫಜಿ ಕುಟುಂಬದವರು 4ನೆಯ ಸಿಕ್ಸ್‍ಟಸ್ ಎಂಬ ಪೋಪ್ ಜಗದ್ಗುರುವಿನ ಬೆಂಬಲದಿಂದ ಲೊರೆನ್ಜೊನ ಪದಚ್ಯುತಿಗೆ ಶತಪ್ರಯತ್ನ ಮಾಡಿದರು. ಪ್ರಾರ್ಥನಾಮಂದಿರದಲ್ಲಿ ದೇವರ ಸೇವೆಯಲ್ಲಿ ನಿರತರಾಗಿದ್ದ ಲೊರೆನ್ಜೊ, ಗಿಯುಲಿಯಾನೊ ಈ ಇಬ್ಬರು ಸೋದರರನ್ನೂ ಕೊಲೆ ಮಾಡಿಸುವ ಪ್ರಯತ್ನದಲ್ಲಿ ಗಿಯುಲಿಯಾನೊನನ್ನು ಇರಿದು ಕೊಲ್ಲಲಾಯಿತು. ಲೊರೆನ್ಜೊ ಎದುರಿಸಿ ಹೋರಾಡಿ ಕೊನೆಗೆ ಗರ್ಭಗೃಹದಲ್ಲಿ ರಕ್ಷಣೆಪಡೆದ. ಅನಂತರ ತನ್ನ ತಮ್ಮನ ಕೊಲೆಯ ಸೇಡನ್ನು ಚೆನ್ನಾಗಿಯೇ ತೀರಿಸಿಕೊಂಡ. ಫಜಿ ಕದಲು ಕೆಲವರನ್ನು ಹಿಡಿಸಿ ನೇಣುಹಾಕಿಸಿದ. ಹಲವರನ್ನು ಚಚ್ಚಿ ರಸ್ತೆಯಲ್ಲಿ ಎಳೆಸಿ ಹಿಂಸಿಸಿದ. ತಪ್ಪಿಸಿಕೊಂಡವರು ನಾಡು ಬಿಟ್ಟು ಓಡಿಹೋದರು. ಲೊರೆನ್ಜೊ ಮೇಲೆ ಪೋಪ್ ಬಹಿಷ್ಕಾರ ಹಾಕಿದ. ಆಗ ಈತ ನೇಪಲ್ಸ್‍ನ ದೊರೆಯೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡು ಪೋಪ್‍ನ ಮನಸ್ಸನ್ನು ಪರಿವರ್ತಿಸಿದ. ಇಬ್ಬರಿಗೂ ರಾಜಿಯಾಯಿತು. ಲೊರೆನ್ಜೊನ ಅಧಿಕಾರ, ಗೌರವ ಹೆಚ್ಚಾದವು. ಫ್ಲಾರೆನ್ಸಿನ ಸಂಪೂರ್ಣ ಒಡೆತನ ಲಭಿಸಿತು. 1480ರಲ್ಲಿ 70 ಜನರ ಆಡಳಿತ ಮಂಡಳಿಯನ್ನು ರಚಿಸಿ ತನ್ನ ಸಂಪೂರ್ಣ ಆಧಿಪತ್ಯವನ್ನು ಸ್ಥಾಪಿಸಿದ. ಯುಕ್ತಿಯ ರಾಜತಂತ್ರಗಳಿಂದ ನೆರೆ ರಾಜ್ಯಗಳೊಂದಿಗೆ ಒಳ್ಳೆಯ ರಾಜಕೀಯ ಸ್ನೇಹ ಹಾಗೂ ವೈವಾಹಿಕ ಸಂಬಂಧಗಳನ್ನಿರಿಸಿಕೊಂಡು ಶತ್ರುಪೀಡಿತವಾಗಿದ್ದ ಫ್ಲಾರೆನ್ಸ್ ನಗರದಲ್ಲಿ ಶಾಂತಿ - ಭದ್ರತೆಗಳನ್ನು ನೆಲೆಗೊಳಿಸಿದ. ಬುದ್ಧಿವಂತರು, ಅನುಭವಿಗಳು, ದಕ್ಷರು, ಜನಹಿತದೃಷ್ಟಿಯುಳ್ಳವರು ಇಂಥವರನ್ನೇ ಆರಿಸಿ ಉನ್ನತ ಆಡಳಿತಾಧಿಕಾರದ ಸ್ಥಾನಗಳಿಗೆ ನೇಮಿಸಿಕೊಂಡ. ವ್ಯಕ್ತಿಸ್ವಾತಂತ್ರ್ಯ, ಪ್ರತಿಷ್ಠೆಗಳನ್ನು ತಗ್ಗಿಸಿ ಸಮಾಜದ ಹಿಡಿತವನ್ನು ಬಲಗೊಳಿಸಿದ. ಸರ್ವಾಧಿಕಾರಿಯಾದರೂ ಪ್ರಜಾವತ್ಸಲನಾಗಿ, ದೀನ ದಲಿತ ಹಾಗೂ ಸಾಮಾನ್ಯರ ಏಳಿಗೆ ಸುಖಗಳಿಗಾಗಿ ಸದಾ ತುಡಿಯುತ್ತ, ದುಡಿಯುತ್ತ ಇವನಂತಹ ಜನೋಪಕಾರಿ ದೊರೆ ಬೇರೆ ಇಲ್ಲ ಎಂಬಂತೆ ನಡೆದುಕೊಂಡ. ತೀರ ಕೆಳವರ್ಗದವರಲ್ಲಿಯೂ ಯೋಗ್ಯರೂ ಬುದ್ಧಿವಂತರೂ ಆದವರನ್ನು ಗುರುತಿಸಿ ಉನ್ನತ ಅಧಿಕಾರಸ್ಥಾನಗಳಿಗೆ ನೇಮಿಸಿಕೊಂಡ. ವ್ಯಾಪಾರ, ಕೈಗಾರಿಕೆ, ಬೇಸಾಯ, ಲೋಕೋಪಯೋಗಿ ಕೆಲಸ ಎಲ್ಲವೂ ಅಭಿವೃದ್ಧಿ ಹೊಂದಿದವು. ಸಾಮಾನ್ಯ ಪ್ರಜೆಗಳ ಹಕ್ಕುಬಾಧ್ಯತೆಗಳ ರಕ್ಷಣೆ, ಸಮಾನತೆಗಳ ಕಡೆಗೂ ವಿಶೇಷ ಗಮನವನ್ನು ಕೊಟ್ಟ.    

	ಈತ ಸ್ವತಃ ಪ್ರತಿಭಾವಂತನಾದ ಕವಿ. ಜೊತೆಗೆ ಅನೇಕ ವಿದ್ವನ್ಮಣಿಗಳಿಗೆ, ಕವಿಗಳಿಗೆ, ಶಿಲ್ಪಿಗಳಿಗೆ, ಚಿತ್ರಕಲಾವಿದರಿಗೆ ಉದಾರವಾದ ಪೋಷಣೆಯನ್ನಿತ್ತು, ಪ್ರೋತ್ಸಾಹವಿತ್ತು ಫ್ಲಾರೆನ್ಸಿನಲ್ಲಿ ನೆಲೆಸುವಂತೆ ಮಾಡಿದ. ಇವನ ಅರಮನೆ ಸಾಹಿತ್ಯ, ಸಂಗೀತ ಹಾಗೂ ಧಾರ್ಮಿಕ ವಿದ್ವದ್‍ಗೋಷ್ಠಿಗಳಿಗೆ ಆಗರವಾಗಿತ್ತು. ಉದಯೋನ್ಮುಖ ಸಾಹಿತಿಗಳಿಗೆ, ಕಲಾವಿದರಿಗೆ ತರಬೇತಿಯ ರಂಗವಾಯಿತು. ವೆರೊಚಿಯೊ, ಲಿಯೊನಾರ್ಡೊ ಡ ವಿಂಚಿ, ಗಿಯೊಲಿಯೊನೊ ಡ ಸಂಗಾಲೊ- ಮೊದಲಾದ ಕಲಾವಿದರಿಗೂ ಇವನು ಆಶ್ರಯ ನೀಡಿದ್ದ. ಇಲ್ಲಿ ಪುಲ್ಸಿ ತನ್ನ ಗ್ರಂಥ ವಾಚನ ಮಾಡಿದ. ಮೈಕೆಲಂಜೆಲೋ ತನ್ನ ಅಭಿಜಾತ ಚಿತ್ರಗಳ ನಕಾಶೆಯನ್ನು ರೇಖಿಸಿದ.     

	ಪ್ರಖರವಾದ ಬುದ್ಧಿ, ಆಳವೂ ವಿಸ್ತಾರವೂ ಆದ ಅಧ್ಯಯನ, ಬಹುಮುಖ ಆಸಕ್ತಿ ಮತ್ತು ಸಾಮಥ್ರ್ಯಗಳಿಂದ ಲೊರೆನ್ಜೊ ಒಬ್ಬ ಪ್ರತಿಭಾವಂತನೆನಿಸಿದ್ದ. ಚಿತ್ರಕಲೆ, ಶಿಲ್ಪ, ಸಂಗೀತ, ಕಾವ್ಯ, ತತ್ತ್ವಶಾಸ್ತ್ರ - ಹೀಗೆ ಯಾವುದೇ ವಿಷಯದ ಮೇಲೂ ವಿದ್ವತ್ಪೂರ್ಣವಾಗಿ, ನಿರರ್ಗಳವಾಗಿ, ಸೊಗಸಾಗಿ ಮಾತನಾಡಬಲ್ಲ ವಾಗ್ಮಿಯಾಗಿದ್ದ. ತಾನು ಪ್ರೋತ್ಸಾಹಿಸಿ ಪೋಷಿಸುತ್ತಿದ್ದ ಸಾಹಿತ್ಯ ಮತ್ತು ಕಲೆಯ ಕ್ಷೇತ್ರಗಳಲ್ಲಿಯೂ ಸ್ವತಃ ಕೈಯಾಡಿಸಿದ್ದ. ಗದ್ಯ - ಪದ್ಯ ಎರಡರಲ್ಲೂ ಈತನದು ಪಲಗಿದ ಲೇಖನಿ. ಏನೇ ಬರೆದರೂ ಅದರ ಮೇಲೆ ಸ್ವಂತಿಕೆಯ ಮುದ್ರೆ ಬಿದ್ದಿರುತ್ತಿತ್ತು. 15ನೆಯ ಶತಕದ ಅಗ್ರಪಂಕ್ತಿಯ ಭಾವಗೀತೆಯ ಕವಿಯಾಗಿಯೂ ಈತ ಪ್ರಸಿದ್ಧನಾಗಿದ್ದಾನೆ. ಈತ ರಚಿಸಿದ 2,3 ಚರಣಗಳ ಕಿರುಗೀತೆಗಳಲ್ಲಿ ಪೆಟ್ರಾರ್ಕನ ಛಾಯೆ, ಜನಪದ ಸಾಹಿತ್ಯದ ದೇಶೀ ಸೊಗಡು ಮೇಳವಿಸಿವೆ. ಹಾಗೆಯೇ ಉತ್ಸವಗೀತೆಗಳೂ ನೃತ್ಯಗೀತೆಗಳೂ ಜನಪ್ರಿಯವಾದವು. ಶ್ರೀಮಂತಿಕೆಯ ಅಭಿರುಚಿ, ಮನೋಧರ್ಮಗಳಲ್ಲಿ ಈ ಹಾಡುಗಳು ಸಂಸ್ಕಾರಗೊಂಡಂತೆ ಕಂಡರೂ ಜನಮನವನ್ನು ಸೂರೆಗೊಳ್ಳಬಲ್ಲ ಸೊಗಸು, ಲವಲವಿಕೆಯ ಹಾಸ್ಯದ ಲೇಪ, ಸೂಕ್ಷ್ಮವಾದ ವಿಡಂಬನೆಯ ಚೂಪು ಮತ್ತು ಗೇಯ ಗುಣಗಳಿಂದ ಕೂಡಿವೆ. ನವುರಾದ ವ್ಯಾಕುಲತೆ, ಸುಖಾಪೇಕ್ಷೆಯ ಮನೋಭಾವ ಸಹ ಈ ಹಾಡುಗಳಲ್ಲಿ ಅಭಿವ್ಯಕ್ತವಾಗಿವೆ. `ನ್ಯಾನ್ಸಿಯಾ ಡಿ ಬಾರ್ಬೆರಿ ನೊ ಎಂಬ ಪ್ರಣಯ ಗೀತೆ ಇದಕ್ಕೆ ಒಳ್ಳೆಯ ಉದಾಹರಣೆ. `ದ ಸಿಂಪೋಜಿಯಂ ಎಂಬ ಇನ್ನೊಂದು ಕೃತಿ ಪೆಟ್ರಾರ್ಕನ `ದ ಟ್ರಯಂಪ್ಸ್‍ನ ಅಣಕವಾಡು. `ದ ಹಂಟ್ ವಿಥ್‍ದ ಫಾಲ್ಕನ್ ಎಂಬ ಕವನದಲ್ಲಿ ಇಡೀ ದಿನದ ಬೇಟೆ ವರ್ಣಿತವಾಗಿದೆ. ರಿಕಾರ್ಡಿ (ನೆನಪುಗಳು) ಎಂಬ ಆತ್ಮಕಥೆಯನ್ನು ಕೂಡ ಈತ ಬರೆದಿದ್ದಾನೆ.     

	ಲೊರೆನ್ಜೊನದು ಆಧುನಿಕ ವಿಚಾರ ಸರಣಿ. ಈತ ಮಾನವತಾವಾದ, ಶ್ರೀಸಾಮಾನ್ಯನ ಏಳಿಗೆ, ಮಾತೃಭಾಷೆಯಲ್ಲೇ ಶಿಕ್ಷಣ, ಸಾಹಿತ್ಯ ರಚನೆಗಳಿಗಾಗಿ ಹೂಡಿದ ಚಳವಳಿಗಳ ಪ್ರವರ್ತಕನಾದ. ಆಗತಾನೆ ಹೊಸದಾಗಿ ಆವಿಷ್ಕಾರವಾಗಿದ್ದ ಮುದ್ರಣಯಂತ್ರದ ಭವಿಷ್ಯದ ಮಹತ್ತ್ವವನ್ನರಿತ ಈತ ಮುದ್ರಣ ಯಂತ್ರಗಳ ಸ್ಥಾಪನೆಗೆ ಹೇರಳವಾಗಿ ಹಣ ಖರ್ಚು ಮಾಡಿದ. ಏಥೊಸ್ ಗಿರಿಯ ಮೇಲಿದ್ದ ಕ್ರೈಸ್ತ ಮಠದಿಂದ ಇನ್ನೂರು ಅತ್ಯಮೂಲ್ಯವಾದ ಹಸ್ತಪ್ರತಿಗಳನ್ನು ತರಿಸಿ ಲಾರೆನ್ಷಿಯನ್ ಪುಸ್ತಕ ಭಂಡಾರಕ್ಕೆ ಸೇರಿಸಿದ.     

	4ನೆಯ ಸಿಕ್ಸ್‍ಟಸ್ ಪೋಪ್‍ನ ನಿಧನಾನಂತರ ಆ ಪೀಠಕ್ಕೆ ಬಂದ 8ನೆಯ ಇನ್ನೊಸೆಂಟ್ ಪೋಪ್‍ನೊಂದಿಗೆ ಒಳ್ಳೆಯ ಸ್ನೇಹಸಂಬಂಧವನ್ನಿರಿಸಿಕೊಂಡ. ಈತ ಆ ಪ್ರಭಾವವನ್ನು ಬಳಸಿ ತನ್ನ ಮಗ ಗಿಯೊವನ್ನಿಗೆ 10ನೆಯ ವಯಸ್ಸಿಗೇ ಕಾರ್ಡಿನಲ್ ಪದವಿ ದೊರೆಯುವಂತೆ ಮಾಡಿದ. ಈ ಗಿಯೊವನ್ನಿ ಮುಂದೆ 10ನೆಯ ಲಿಯೊ ಎಂಬ ಹೆಸರಿನಲ್ಲಿ ಪೋಪ್ ಆದ. ಹಾಗೆಯೇ ಮೆಡಿಸಿ ವಂಶದ ಇನ್ನೊಬ್ಬ ವ್ಯಕ್ತಿ, ಮೊದಲನೆಯ ಗಿಯುಲಿಯಾನೊನ ಮಗ ಗಿಯುಲಿಯೊ ಸಹ ಕಾರ್ಡಿನಲ್ ಆಗಿ, ಮುಂದೆ 1523ರಲ್ಲಿ 7ನೆಯ ಕ್ಲೆಮೆಂಟ್ ಪೋಪ್ ಆದ.    

	ಲೊರೆನ್ಜೊ ಅತ್ಯಂತ ಕಿರಿಯ ಪ್ರಾಯದಲ್ಲೇ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಂಡ. ಚಿಕ್ಕವನಾದರೂ ತುಂಬ ಧೈರ್ಯ ವಿವೇಕಗಳಿಂದ ಎದುರಾದ ಎಲ್ಲ ಆಪತ್ತುಗಳನ್ನೆದುರಿಸಿ ಗೆದ್ದ; ಫ್ಲಾರೆನ್ಸಿನ ಜನಾನುರಾಗಿ ನಾಯಕನಾದ; ನ್ಯಾಯ ನಿಷ್ಠ ಆಡಳಿತಗಾರನೆಂದು ಹೆಸರು ಪಡೆದ. ವಿಷಯ ಲಂಪಟನಾಗಿ ನಡೆಸಿದ ಈತನ ಶೀಲರಹಿತ ಜೀವನದ ಬಗ್ಗೆ ಆಡಿಕೊಳ್ಳುತ್ತಿದ್ದವರೇ ಈತನ ಔದಾರ್ಯ, ಕ್ಷಮಾಗುಣಗಳನ್ನೂ ಪ್ರಜಾವಾತ್ಸಲ್ಯವನ್ನೂ ಕೊಂಡಾಡಿದರು.    
	ಈತ ಆಲ್ಫಾನ್ಸಿನಾ ಓರ್ಸಿನಿ ಎಂಬಾಕೆಯನ್ನು ಮದುವೆಯಾಗಿದ್ದ. ಇವರಿಗೆ ಮೂವರು ಪುತ್ರರೂ-ಪಿಯೆರೊ ದಿ ಅನ್‍ಫಾರ್ಚುನೆಟ್ (1472--1503), ಗಿಯೊವನ್ನಿ (1475--1521), ಗಿಯುಲಿಯಾನೊ(1479--1516), ಮೂವರು ಪುತ್ರಿಯರೂ (ಲೂಕ್ರೆಜಿಯಾ, ಮ್ಯಾಡಲಿನ, ಕಾಂಟೆಸ್ಸಿನಾ) ಇದ್ದರು.   				
	(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ